Tuesday, 3 January 2012

NEENU

ಸೂರ್ಯ ನಿನ್ನ ಕೈಯಲಿ ಕೆಂಪು ಚೆಂಡಂತೆ
ಎತ್ತರಕೆ ಪುಟಿದು ಬೆಂಕಿ ಉಂಡೆಯಾಗಿ ಗಾಳಿಯಲಿ
ತಣಿದು ಕೆಂಡ ಕಡಲ ಹಾರುವನಂತೆ
 ವಿರಹದ ಕಾವಲಿ ಬೆಂದು ಒಂಟಿ ಭೂಮಿಸತಿ
 ರಾತ್ರಿ ನೆನಪಲಿ ತಮದ ಕಂಬಳಿ ಹೊದೆಯುವಳಂತೆ

ನೀನು ನಕ್ಕಾಗೆಲ್ಲ ಮಿಂಚು ಹೊಳೆಯುವುದಂತೆ
ಹಲ್ಲ ಮಿನುಗುಗಳು ಹಾರಿ ಸಾಲು ನಕ್ಷತ್ರಗಳಾಗಿ
ಆಗಸವೇರಿ ಬುವಿಯೆಡೆ ತುಂಟ ನಗು ಹಾಸುವವಂತೆ
ಅವು ಮೈಮರೆತಾಗೆಲ್ಲ ಉಲ್ಕಾಪಾತ ಆಗುವುದಂತೆ
ಕೆಲವು ಮಿಣುಕು ಹುಳುಗಳಾಗಿ ನಿನ್ನ ಅರಸಿವೆಯಂತೆ

ಹುಲ್ಲು ಹಾಸ ಇಬ್ಬನಿ ನಿನ್ನ ಕಂಬನಿಯಂತೆ
ಹನಿಹನಿಯಾಗಿ ಉದುರಿ ಎಲೆಎಲೆಗಳ  ತೊಯಿಸಿ
ಬುವಿಯ ನೋವ ಮರೆಸಿ ಆರುವವಂತೆ
ಜೋರಾಗಿ ಅತ್ತಾಗೆಲ್ಲ ಮಳೆ ಸುರಿಯುವುದಂತೆ
ಕೆಲವು ಇಳೆಯ ಹೊಳೆಯಾಗಿ ನಿನ್ನ ಜಪಿಸುವವಂತೆ

ನುಡಿದು ಹಾಡುವ ಹಕ್ಕಿ ನಿನ್ನ ಕೊಳಲು ಸಾರಂಗಿಯಂತೆ
ಗಾಳಿಯಲಿ ಉಳಿದು ತಂತಿಯಲಿ ಸುಳಿದು ಆದ್ರವಾಗಿ
ಸ್ವರ ಲಹರಿ ಬೆಳಗು ಬೈಗು ರಾಗಗಳಾಗುವವಂತೆ
ಮಧುರ ಶಾಂತ ರಸ ಉಕ್ಕುವವಂತೆ
ಕೆಲವು ಲಲಿತ ಸಾರಂಗ ಭೈರವಿಯಾಗಿ
ನಿನ್ನ ಗೂಡ ಮಿಡಿದಿವೆಯಂತೆ

         SEPTEMBER 29, 2011-TARANGA

1 comment: