ಸೂರ್ಯ ನಿನ್ನ ಕೈಯಲಿ ಕೆಂಪು ಚೆಂಡಂತೆಎತ್ತರಕೆ ಪುಟಿದು ಬೆಂಕಿ ಉಂಡೆಯಾಗಿ ಗಾಳಿಯಲಿ
ತಣಿದು ಕೆಂಡ ಕಡಲ ಹಾರುವನಂತೆ
ವಿರಹದ ಕಾವಲಿ ಬೆಂದು ಒಂಟಿ ಭೂಮಿಸತಿ
ರಾತ್ರಿ ನೆನಪಲಿ ತಮದ ಕಂಬಳಿ ಹೊದೆಯುವಳಂತೆ
ನೀನು ನಕ್ಕಾಗೆಲ್ಲ ಮಿಂಚು ಹೊಳೆಯುವುದಂತೆ
ಹಲ್ಲ ಮಿನುಗುಗಳು ಹಾರಿ ಸಾಲು ನಕ್ಷತ್ರಗಳಾಗಿ
ಆಗಸವೇರಿ ಬುವಿಯೆಡೆ ತುಂಟ ನಗು ಹಾಸುವವಂತೆ
ಅವು ಮೈಮರೆತಾಗೆಲ್ಲ ಉಲ್ಕಾಪಾತ ಆಗುವುದಂತೆ
ಕೆಲವು ಮಿಣುಕು ಹುಳುಗಳಾಗಿ ನಿನ್ನ ಅರಸಿವೆಯಂತೆ
ಹುಲ್ಲು ಹಾಸ ಇಬ್ಬನಿ ನಿನ್ನ ಕಂಬನಿಯಂತೆ
ಹನಿಹನಿಯಾಗಿ ಉದುರಿ ಎಲೆಎಲೆಗಳ ತೊಯಿಸಿ
ಬುವಿಯ ನೋವ ಮರೆಸಿ ಆರುವವಂತೆ
ಜೋರಾಗಿ ಅತ್ತಾಗೆಲ್ಲ ಮಳೆ ಸುರಿಯುವುದಂತೆ
ಕೆಲವು ಇಳೆಯ ಹೊಳೆಯಾಗಿ ನಿನ್ನ ಜಪಿಸುವವಂತೆ
ನುಡಿದು ಹಾಡುವ ಹಕ್ಕಿ ನಿನ್ನ ಕೊಳಲು ಸಾರಂಗಿಯಂತೆ
ಗಾಳಿಯಲಿ ಉಳಿದು ತಂತಿಯಲಿ ಸುಳಿದು ಆದ್ರವಾಗಿ
ಸ್ವರ ಲಹರಿ ಬೆಳಗು ಬೈಗು ರಾಗಗಳಾಗುವವಂತೆ
ಮಧುರ ಶಾಂತ ರಸ ಉಕ್ಕುವವಂತೆ
ಕೆಲವು ಲಲಿತ ಸಾರಂಗ ಭೈರವಿಯಾಗಿ
ನಿನ್ನ ಗೂಡ ಮಿಡಿದಿವೆಯಂತೆ
SEPTEMBER 29, 2011-TARANGA